ಎಕ್ಸ್‍ಪೊ
	ಇಂಗ್ಲಿಷಿನ ಎಕ್ಸ್‍ಪೊಸಿಷನ್ ಎಂಬ ಶಬ್ದದ ಸಂಕ್ಷಿಪ್ತರೂಪ. ಕಲೆ, ವಿe್ಞÁನ, ಕೈಗಾರಿಕೆ, ವಾಣಿಜ್ಯ ಮುಂತಾದ ನಾನಾಕ್ಷೇತ್ರಗಳಲ್ಲಿ ಸಾಧಿಸಿರುವ ಪ್ರಗತಿಯ ವ್ಯವಸ್ಥಿತ ಪ್ರದರ್ಶನ. ನಾನಾ ಸಾಧನೆಗಳ ಬಗ್ಗೆ ಸಾರ್ವಜನಿಕರಲ್ಲಿ ಆಸಕ್ತಿಯ ಪ್ರಚೋದನೆಯೂ ಉತ್ಪಾದನ ಪ್ರವರ್ತನೆಯೂ ವ್ಯಾಪಾರ ವಿಸ್ತರಣೆಯೂ ಇದರ ಉದ್ದೇಶ. ಸಂತೆ, ಜಾತ್ರೆ, ಪರಿಷೆಗಳಿಗೂ ಪ್ರದರ್ಶನಗಳಿಗೂ ಒಂದು ಮುಖ್ಯ ವ್ಯತ್ಯಾಸವುಂಟು. ಅವು ಸಾಮಾನ್ಯವಾಗಿ ಕ್ಲುಪ್ತ ಕಾಲಾವಧಿಯಲ್ಲಿ ಪುನರ್ಭವಿಸುತ್ತವೆ. ಆದರೆ ಪ್ರದರ್ಶನಗಳು ನಿಯತಕಾಲಿಕವಾಗಿಯೇ ಇರಬೇಕಾದುದಿಲ್ಲ. ಇವು ಹಲವು ತಿಂಗಳ ಕಾಲ ನಡೆಯಬಹುದು. ಸಂತೆ, ಜಾತ್ರೆ ಅಥವಾ ಪರಿಷೆ ಒಂದು ಹಂಗಾಮಿ ಮಾರುಕಟ್ಟೆ. ವ್ಯಾಪಾರ ಪ್ರವರ್ತನೆಯೇ ಅದರ ಮುಖ್ಯೋದ್ದೇಶ. ಅದು ನಡೆಯುವ ಸ್ಥಳವೂ ಸಾಮಾನ್ಯವಾಗಿ ನಿರ್ದಿಷ್ಟ. ಆದರೆ ಪ್ರದರ್ಶನದಲ್ಲಿ ಭಾಗವಹಿಸುವವರಿಗೂ ಇದನ್ನು ಸಂದರ್ಶಿಸುವವರಿಗೂ ವ್ಯಾಪಾರೋದ್ದೇಶವೇ ಇರಬೇಕಾದುದಿಲ್ಲ. ಅದ್ಭುತರಮ್ಯವಾದ ಆಕರ್ಷಣೆಗಳನ್ನೊಡ್ಡಿ ಜನರನ್ನು ತನ್ನತ್ತ ಸೆಳೆದು, ಅವರ ಬುದ್ಧಿಗೆ ಆಹಾರವನ್ನೂ ಮನಸ್ಸಿಗೆ ಆಹ್ಲಾದವನ್ನೂ ಬೇಗುದಿಗೊಂಡ ಜೀವಕ್ಕೆ ವಿಶ್ರಾಂತಿಯನ್ನೂ ಪುನಶ್ಚೈತನ್ಯವನ್ನೂ ಎರೆಯುವ ಪ್ರದರ್ಶನಗಳು ಸಕಲ ವರ್ಗಗಳ ಭಿನ್ನರುಚಿಗಳ ಜನರ ಬೃಹತ್ ಸಮಾರಾಧನೆಯೆನಿಸಿ ಈ ಶತಮಾನದ ಜನಜೀವನದ ಮುಖ್ಯ ಸಂಸ್ಥೆಗಳಾಗಿ ಪರಿಣಮಿಸಿದೆ. ಇಲ್ಲಿ ಪ್ರದರ್ಶಿತವಾದ ಪದಾರ್ಥಗಳಿಗೂ ಕೈಗಾರಿಕೆಗಳಿಗೂ ಯಥೇಚ್ಛವಾದ ಪ್ರಚಾರ ಲಭಿಸುವುದರಿಂದ ಇವು ವಾಣಿಜ್ಯ ದೃಷ್ಟಿಯಿಂದಲೂ ಬಲು ಉಪಯುಕ್ತ. ಪ್ರವಾಸೋದ್ಯಮವನ್ನು ಬೆಳೆಯಿಸಿ, ಅಂತರ ರಾಷ್ಟ್ರೀಯ ಸೌಹಾರ್ದ ಸ್ಥಾಪನೆಗೂ ವಿದೇಶೀ ವಿನಿಮಯ ಸಂಪಾದನೆಗೂ ಸಾಧನವಾಗಿ ಪರಿಣಮಿಸಿರುವ ಈ ಪ್ರದರ್ಶನಗಳು ನಾಗರಿಕತೆಯ ಪ್ರಗತಿಯ ದ್ಯೋತಕಗಳಾಗಿವೆ ; ಭಾವಿ ವಿಶ್ವದ ಪಥ ಪ್ರದರ್ಶಕಗಳಾಗಿವೆ.

	ಪರಿಷೆ (ಫೇರ್), ಪ್ರದರ್ಶನ(ಎಕ್ಸಿಬಿಷನ್, ಎಕ್ಸ್‍ಪೊಸಿಷನ್) ಎಂಬ ಶಬ್ದಗಳು ಸಮಾನಾರ್ಥಗಳೆಂಬಂತೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇವನ್ನು ಬಳಸುವುದುಂಟು. ಫ್ರಾನ್ಸ್, ಬ್ರಿಟನುಗಳಲ್ಲಿ ಹೀಗಲ್ಲ. ವಾಣಿಜ್ಯೋದ್ದೇಶದಿಂದ ವ್ಯವಸ್ಥೆಗೊಳಿಸಿದ್ದು ಪರಿಷೆ. ರಾಷ್ಟ್ರೀಯ ಅಂತರರಾಷ್ಟ್ರೀಯ ವ್ಯಾಪ್ತಿಯುಳ್ಳದ್ದು ಪ್ರದರ್ಶನ. ಬ್ರಿಟನಿನಲ್ಲಿ ಎಕ್ಸಿಬಿಷನ್ ಎಂದು ಕರೆಯುವ ಇದನ್ನು ಫ್ರಾನ್ಸಿನಲ್ಲಿ ಎಕ್ಸ್‍ಪೊಸಿಷನ್ ಎಂಬ ಹೆಸರಿನಿಂದ ಕರೆಯುತ್ತಾರೆ.							
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ